Thursday, August 6, 2020

ಪ್ರಶ್ನೆ ...

                           
                
ಈಗ ಚಿಮಿಣಿ ಎಣ್ಣೆ ಸಿಗುವುದಿಲ್ಲ.ಡೀಸೆಲ್ ದೀಪದ ಹೊಗೆಕಾರುವ ಬೆಳಕಿನಲ್ಲಿ ಬೀಡಿಕಟ್ಟಿ ಮಲಗುವಾಗ ನಡುರಾತ್ರೆ ಆಗ್ತದೆ.
  ಬೆಳಗ್ಗೆ ಮೂರೂವರೆಗೆ ಎದ್ದು ಪುನ: ಬೀಡಿಯ ಕೆಲಸ.ಏಳು - ಒಂಭತ್ತು ವರ್ಷದ ಇಬ್ಬರು ಗಂಡು ಮಕ್ಕಳಿಗೆ , ಗಂಡನಿಗೆ , ತನಗೆ ಬೆಳಗಿನ ತಿಂಡಿ ಮಾಡಿಕೊಳ್ಳಬೇಕು .
  ಮಧ್ಯಾಹ್ನ ಊಟಕ್ಕೆ ಗಂಜಿ - ಚಟ್ಣಿಯೋ ಪಲ್ಯವೋ ಸಿದ್ದ ಆಗಬೇಕು.
  ಬಾಕಿ ಮನೆಗೆಲಸ ,ಸೊಸೈಟಿ - ಅಂಗಡಿ ಜೊತೆಗೆ ಬೀಡಿ ಎಲೆ ಕತ್ತರಿಸಿಕೊಳ್ಳಬೇಕು. 
ಗಂಡ ಕೆಲಸಕ್ಕೆ ಹೋದರೆ ಹೋದ.ಏನಾದರೂ ತಂದರೆ ತಂದ.
 ಕುಡಿದು ಬಂದರೆ ಅವ ದುರ್ವಾಸ .
     ಇಬ್ಬರು ಮಕ್ಕಳೂ ಸುಮ್ಮಗಿರುವವರಲ್ಲ. ಮನೆಯ ಸುತ್ತ ಕಾಡಿನಲ್ಲಿ-
 ನೆಡುವುದು - ಕಡಿಯುವುದು - ಮೀಯುವುದು - ಜಾರುವುದು - ಏರುವುದು  ... ಅವರ ಮೇಲೆ ಸದಾ ತಾಯಿ ಕಣ್ಣು ಇರಲೇಬೇಕು.
  ಹೀಗೆ ಬದುಕಾಟ ಮಾಡುವ ಹೆಣ್ಣೊಬ್ಬಳು, ನಮ್ಮೂರಲ್ಲಿ ಇದ್ದಾಳೆ.ಬದುಕಿನ ಏಕತಾನತೆಯಿಂದ ಬೇಸತ್ತು, ನಮ್ಮಲ್ಲಿಗೆ ಒಮ್ಮೊಮ್ಮೆ ಬರುತ್ತಾಳೆ.
 ದನಗಳಿಗೆ ಹುಲ್ಲು ,ಚೂರುಪಾರು ಮನೆಗೆಲಸಗಳನ್ನು ಮಾಡಿ - ಮಾತಾಡಿ, ಹೊಟ್ಟೆತುಂಬ ಉಂಡು ಹೋಗುತ್ತಾಳೆ.
  ಮಕ್ಕಳೂ ಅಷ್ಟೇ - ಒಂದು ಪೇರಳೆ ಸಿಕ್ಕಿದರೆ ಮೂರು ತುಂಡು ಮಾಡುತ್ತವೆ.

 ಮೊನ್ನೆ - 
" ಮೊಬೈಲು ತೆಗೆಯಲು ಲೋನು ಸಿಗ್ತದಾ ಅಣ್ಣೇರೇ " ಅಂತ ನನ್ನಲ್ಲಿ ಕೇಳಿದಳು !
 ಓನ್ ಲೈನ್ ತರಗತಿಗಾಗಿ .ಕಂದಮ್ಮಗಳು ವಿದ್ಯಾವಂತರಾಗುವುದು ಅವಳ ಕನಸು .
  ಅಮೆಝಾನ್ ,ಪ್ಲಿಪ್ಕಾರ್ಟ್ , ಇ ಎಮ್ ಐ .. ಎಲ್ಲ ಉಂಟಲ್ಲ . ಆದರೆ ಅದು, ದುಡ್ಡಿದ್ದವರಿಗಾಗಿ ಮಾತ್ರ.
ಸ್ಮಾರ್ಟ್ ಫೋನಿಗೆ ಬೇಕು ಆರೇಳು ಸಾವಿರ.
     ನಾನೇನು ಅನುಕೂಲಸ್ಥನೇ! ಆದರೂ ,ಹಳತಾದರೂ ಒಂದು ಕೊಡಿಸಿದರೆ ?
  ಕರೆಂಟಿಲ್ಲದ ಮನೆ. 
ಮೊಬೈಲು ಚಾರ್ಜು ಮಾಡುವದು ಹೇಗೆ ?
ನೆಟ್ ಒಫರ್ ಹಾಕುವುದಕ್ಕೂ ಬೇಕಲ್ಲ ಒಂದು ಮೊತ್ತ ?
   ಊರಶಾಲೆಯ ಟೀಚರ್, ದಾರಿಯಲ್ಲಿ ಕಾಣಸಿಕ್ಕಿದರೂ ನೋಟ್ಸ್ ಕೊಡುವುದಿಲ್ಲ - ಸರಕಾರದ ಆದೇಶವೇ ಹಾಗಿದೆ . ಓನ್ ಲೈನ್ ತರಗತಿಯ ಓನ್ ಲೈನ್ ದಾಖಲಾತಿ ಬೇಕು .
        ಇನ್ನು ಹೇಗೆ ?
                                            -ಪನೆಯಾಲರವಿರಾಜ.

3 comments:

  1. ಆ ಹೆಣ್ಣು ಮಗಳ ಜೀವನೋತ್ಸಾಹಕ್ಕೆ ದೊಡ್ಡದಾದ ಹ್ಯಾಟ್ಸಪ್. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಧಾರವಾಗುವ ಸಹಾಯ ಹಸ್ತಗಳು ಮುಂದೆ barali. ನಾವೂ ಕೂಡ ಅದಕ್ಕೆ ಸಿದ್ಧ

    ReplyDelete
  2. ಆ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ಒಂದು ಮಗುವನ್ನು ನಮ್ಮ ಕೈಗಿತ್ತರೆ ಒಳ್ಳೆಯ ವಿದ್ಯಾಭ್ಯಾಸವನ್ನು ಖಂಡಿತಾ ನೀಡುತ್ತೇವೆ.

    ReplyDelete
  3. ಆ ಹೆಣ್ಣು ಮಗಳ ಜೀವನೋತ್ಸಾಹಕ್ಕೆ ದೊಡ್ಡದಾದ ಹ್ಯಾಟ್ಸಪ್

    ReplyDelete