Wednesday, August 12, 2020

ಸ್ವಗತ ...

         

       ' ಲಾಕ್ ಡೌನ್ ' 
ಹುಟ್ಟಿದಾರಭ್ಯ ಕೇಳದ ಪದ ! ಸ್ವಗೃಹದಲ್ಲಿ ಸ್ವಯಂ ಬಂಧನ.  ಹೊಣೆಯರಿತು ಒಡ್ಡಿಕೊಳ್ಳಬೇಕಾದ ಸೆರೆವಾಸ.
    ಮಾರ್ಚ್ ೬ / ೭ ನನ್ನಣ್ಣನ ವರ್ಷಾಂತ. ಅವ ತೀರಿಕೊಂಡು ಒಂದು ವರ್ಷ ಆಯ್ತು.
ಹೋಗಲೇ ಬೇಕು ..
ಸರಿ.
ಹೋಗುವುದು ಹೇಗೆ ?
ಈಗ ನನ್ನ ವಸತಿ ಕರ್ನಾಟಕದಲ್ಲಿ . ಹೋಗಬೇಕಾದ್ದು ಕೇರಳದ ಪನೆಯಾಲಕ್ಕೆ .ಕೇರಳ ಕರ್ನಾಟಕದ ಗಡಿ ಮುಚ್ಚಿದೆ , ಪೋಲೀಸ್ ಪಹರೆ ಇದೆ . ದಾಟುವಂತಿಲ್ಲ.
  ಪರಿಚಿತ ಪೋಲೀಸೊಬ್ಬರಿಗೆ ಫೋನ್ ಮಾಡಿ ಕೇಳಿದೆ -
" ಯಾವ ಕಾರಣಕ್ಕೂ ಬಿಡುವಂತಿಲ್ಲ ಸರ್,
 ಮತ್ತೆ - ನಿಮಗೆ ಧೈರ್ಯ ಇದ್ರೆ -  ಕಾಡದಾರಿ ಅಲ್ವಾ , ೪ ಕಿಮೀ ನಡೆದು ಹೋಗಿ ಬಿಡಿ , ನೀವೆಂತ ಅಪಾಯಕಾರಿ ಅಲ್ವಲ್ಲ."
  ಆಸೆ ಹುಟ್ಟಿತು .. ಅಣ್ಣನ ದಿನದಲ್ಲಿ ಪಾಲ್ಗೊಳ್ಳಬಹುದು , ಅತ್ತಿಗೆಯ ಕಾಲಿಗೆ ಬೀಳಬಹುದು , ಅಣ್ಣನ ಮಕ್ಕಳ ತಲೆಗೆರಡು ಅಕ್ಷತೆ ಹಾಕಬಹುದು ...
      ಆದರೆ ಅತಿಕ್ರಮಣ ...
ದೇಶಕ್ಕೆ ಬಂದ  ಆಪತ್ತನ್ನು ಇದಿರಿಸುವುದಕ್ಕಾಗಿ, ಆಳುವ ಪ್ರಭು ಮಾಡಿದ ದಿಗ್ಬಂಧ. ಉಲ್ಲಂಘಿಸಬಹುದೇ ?
      ಇಲ್ಲ ನಾನು ಹೋಗಲಿಲ್ಲ ..
ಎಳವೆಯಿಂದ ನನ್ನನ್ನು ಪೋಷಿಸಿ ಬೆಳೆಸಿದ, ನನ್ನಣ್ಣನ ತಿಥಿಕಾರ್ಯಗಳಿಗೆ ನಾನು ಹೋಗದೇ ಉಳಿದೆ.

ನಾನು ಶ್ರೀಕಟೀಲು ಮೇಳದ ಕಸುಬುಧಾರಿ.
  ಹಿಮ್ಮೇಳವಿರಲಿ ಮುಮ್ಮೇಳವಿರಲಿ - ಝಗಮಗಿಸುವ ರಂಗವೇರಿದರೆ ಒಂದು ಭ್ರಾಂತಿ ಆವರಿಸುವುದಿದೆ .ತಾನು ನಿರ್ವಹಿಸುವ ಪೌರಾಣಿಕ ಪಾತ್ರಗಳ ಗುಂಗು , ಹಗಲಾದರೂ ಇಳಿಯದೆ ,ಹಾದಿಗೆಡಿಸುವ ಅಮಲು ಅದು.! ಆ ವಿಷ ಬೀಜಕ್ಕೆ ಈಗಿನ ಕೆಲವು ವಾಟ್ಸೇಪ್ ಕಲಾಭಿಮಾನಿಗಳು, ನೀರುಣಿಸುತ್ತಲೂ ಇರುತ್ತಾರೆ.
ಸ್ಟೇಜಿನ ಮುಂದಿರುವವರೆಲ್ಲ ನನ್ನ ಆರಾಧಕರು , ಇತರ ನರಮನುಷ್ಯರಿಗಿಂತ ತಾನೇ ಶ್ರೇಷ್ಠನೆಂದು ತಲೆಯೆತ್ತಿ ನಡೆಯುತ್ತಿದ್ದೆ ...
   ವೈರಾಣುವೊಂದು ಧುತ್ತನೆ ಮುಂದೆ ನಿಂದು ಅಬ್ಬರಿಸಿತು .ನೀನಿಷ್ಟೇ ಎಂದು ಬೆಟ್ಟುಮಾಡಿ ತೋರಿಸಿತು! ಭೂಪತಿ,ಸುರಪತಿ,ಅಸುರಪತಿಗಳೆಂಬ ಕೋವಿದರೆಲ್ಲ ಕೋವಿಡ್ ೧೯ ರ ಮುಂದೆ ಮಂಡಿಯೂರಿದರು !
ಭವಿಷ್ಯದ ಪ್ರಶ್ನೆಯೇ ಭೂತವಾಗಿ ಕಂಗೆಡಿಸಿತು.ಎಲ್ಲ ಕ್ಷೇತ್ರಗಳೂ ಒದ್ದಾಡಿದವು.ಬಡವನೊಂದಿಗೆ ಬಲ್ಲಿದನೂ.
     ನಾನು - ತಾನೆಂಬುದೆಲ್ಲ ಎಷ್ಟು ದುರ್ಬಲ ವಾಚಕ !

ನಿನ್ನೆಯ ಆಟಮುಗಿಸಿ ಬರುವಾಗ ಇವತ್ತಿನ ಆಟ ಇರಲಾರದೆಂಬ ನಿರ್ಣಯ ನಮಗಿರಲಿಲ್ಲ.ಮತ್ತೆ ಚೌಕಿ ಸೇರಲಿಲ್ಲ. ಬಹುವಾಗಿ ಪ್ರೀತಿಸುವ ರಂಗವನ್ನು ಹೊಗಲಿಲ್ಲ. 
ಸಹಕಲಾವಿದರಿಗೆ ವಿದಾಯಕೋರದೆ ,ಪತ್ತನಾಜೆಸೇವೆಯಂದು ಗೆಜ್ಜೆ ಬಿಚ್ಚಿ , ದೇವರ ಮುಂದಿಟ್ಟು ನಮಸ್ಕರಿಸದೆಯೇ ಬಹುಶ: ಈ ವರ್ಷದ ತಿರುಗಾಟವೇ ಮುಗಿದು ಹೋಗುತ್ತದೆ .

ನಾನು ಆಟಕ್ಕೆ ಹೋಗದೆ , ಮಗ ಪಾಠಕ್ಕೆ ಹೋಗದೆ -ಪೇಟೆಯ ಮುಖ ಕಾಣದೆ ಎರಡು ತಿಂಗಳಾಯಿತು !ತಲೆಗೂದಲು ಬೆಳೆದು ಮುಸುವನ ಹಾಗಾಗಿದೆ ! ಸ್ವಯಂ ಕೇಶಕರ್ತನ ಮಾಡುವ ಚಿತ್ರಗಳನ್ನು ನೋಡಿದ್ದೆ . ಧೈರ್ಯ ಬರಲಿಲ್ಲ .ನಮ್ಮೂರಲ್ಲೇ ಒಬ್ಬ ಹಜಾಮ ಇದ್ದಾನೆ ,ಮನೆಗೆ ಬಂದ ಸುರಕ್ಷಿತ - ಪರಿಚಿತರಿಗೆ ಕರ್ತನಸೇವೆ ಮಾಡುತ್ತಿದ್ದಾನೆಂದು ತಿಳಿಯಿತು.
   ಹೋಗೋಣವೇ .? ಸರಕಾರೀ ನಿಯಮ ಪ್ರಕಾರ ಹೋಗಕೂಡದು.
    ಬಿಎ ಪದವೀಧರನಾಗಿ,ಹವ್ಯಾಸಿ ಯಕ್ಷಗಾನ ಕಲಾವಿದನಾಗಿ,ನೇಪಥ್ಯಸಹಾಯಕನಾಗಿ ದುಡಿಯುವ ಆತನಿಗೆ ೬೦ ರ ಹರೆಯ. ಆಟ ಇಲ್ಲದೆ , ಕುಲಕಸುಬು ಮಾಡಲಾಗದ ಈ ಕಾಲದಲ್ಲಿ , ನಮ್ಮಿಬ್ಬರ ತಲೆಕೊಟ್ಟರೆ ಅವನ ನಾಲ್ಕು ದಿನದ ಖರ್ಚಿಗಾದೀತಲ್ಲವೇ ?
      ಹೋದೆವು .
" ನೀರುಮಾತ್ರ ಕೆಳಗಿಂದ ಹೊತ್ತು ತರ್ಬೇಕು ಬೇರೆ ತಾಪತ್ರಯ ಏನಿಲ್ಲ " ಎನ್ನುತ್ತಾ ನಮ್ಮನ್ನು ಸ್ವಾಗತಿಸಿದ.

ಚಿಕ್ಕ ಮನೆಯ ಪುಟ್ಟ ಅಂಗಳವೇ ಸೆಲೂನು.ನಾವು  ಕೊಂಡೊಯ್ದ ಬಟ್ಟೆಯನ್ನೇ ಹೊದೆಸಿ,ಕೂದಲು ಕತ್ತರಿಸಿ
ನಮ್ಮನ್ನು ಚಂದ ಮಾಡಿಬಿಟ್ಟ !

ಸಣ್ಣ ಮೊತ್ತವೊಂದನ್ನು ಅವನ ಕೈಯಲ್ಲಿಟ್ಟೆ . ನನ್ನಲ್ಲಿ ಇದೆ - ನಾನು ದಾತಾರ , ಎಂದು ಬಿಚ್ಚಬಹುದಾದ ನನ್ನ ಭಾವದ ಹೆಡೆಯನ್ನು ಮೆಟ್ಟಿ ನಿಂತಿದ್ದೆ.
ಸಂತೋಷದಿಂದ - ತನ್ನ ಕುಲವೃತ್ತಿಗೆ ಸಂದ ಪ್ರತಿಫಲ ಇದು , ಎಂಬ ಸ್ವಾಭಿಮಾನ ತಂದ ಸಂತಸದಿಂದ ಸ್ವೀಕರಿಸಿದ. ಎಣಿಸಿಯೂ ನೋಡದೆ ಒಳಗಿಟ್ಟ !
      ದೀನ ಯಾರು - ದಾನಿ ಯಾರು !
   ಹಗುರಾದ ತಲೆಯೊಂದಿಗೆ ಮನೆ ಸೇರಿದೆವು .

ಕೊರೋನ ತಂದ ದುರಂತ ಅಸಹನೀಯವಾದುದು 
ನಿಜ. ಅದನ್ನು ಗೆಲ್ಲಬೇಕಾದರೆ ಲಾಕ್ ಡೌನ್ ಅತ್ಯಗತ್ಯ. ತತ್ಪರಿಣಾಮಗಳು ಅನಿವಾರ್ಯ.

ಆದರೆ - 
ವಿಜೃಂಭಣೆಯ ಸಮಾರಂಭಗಳು
ಅನವಶ್ಯಕ ತಿರುಗಾಟ - ವಿಹಾರಗಳು
ಒಮ್ಮೆ ಬಾಯಾರಿದರೆ ಒಂದು ಕುಪ್ಪಿ ನೀರು ಎಂಬ ಪ್ರವೃತ್ತಿ
ಫಾಸ್ಟ್ ಫುಡ್ ವ್ಯಾಮೋಹ
ವಿನೋದದ ವಾಹನಯಾತ್ರೆಗಳು
ಮದ್ಯಪಾನ  ...
ಎಲ್ಲವೂ ಸೀಲ್ ಡೌನ್ ಆಗಿದೆ !

ಓಝೋನ್ ರಂದ್ರ ಮುಚ್ಚುತ್ತಿದೆ .. ಗಂಗೆ ತನ್ನ ಪಾಪವನ್ನು ತಾನೇ ತೊಳೆದು ಕೊಳ್ಳುತ್ತಿದ್ದಾಳೆ ...ಪರಿಸರ ಅಮಲಿನವಾಗುತ್ತಿದೆ !
ಇದು ಪ್ರಕೃತಿ ನಮಗೆ ನೀಡಿದ ಎಚ್ಚರಿಕೆ .
ನಿಸರ್ಗ ವ್ಯಗ್ರವಾದರೆ - ಮಾನವ ಒಬ್ಬಂಟಿ, ಅಸಹಾಯಕ .
ವರ್ಷದಲ್ಲಿ ಒಂದು ತಿಂಗಳಾದರೂ ದೇಶವಾಸಿಗಳೆಲ್ಲ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಆಚರಿಸುವುದು ವಿಹಿತ.
             ನಿಸರ್ಗವನ್ನು ಬೆಲೆವೆಣ್ಣಿನಂತೆ ಬಳಸದೆ,
             ಹೆತ್ತಬ್ಬೆಯಂತೆ ಗೌರವಿಸೋಣ.
ದೇಶ ಕ್ಷೋಭರಹಿತವಾಗಲಿ .
         ‌ನಮಸ್ಕಾರ .


ಪನೆಯಾಲ ರವಿರಾಜ.
ಜೋಗಿಮೂಲೆ ಮನೆ
12-8-2020

No comments:

Post a Comment