ಹೂಬಿಸಿಲು ಕಾಣುತ್ತದೆ.ಹದವಾದ ಗಾಳಿಗೆ ಹೂಬಳ್ಳಿಗಳು ತಲೆಯೆತ್ತುತ್ತಿವೆ.ದುಂಬಿ - ಜೇನ್ನೊಣ - ಹಕ್ಕಿಗಳ ಹಾಡು ಸಂಗೀತಮಯವಾಗಿದೆ. ಪ್ರಕೃತಿಗೇ ಉಲ್ಲಾಸ ಬಂದಿದೆ.
ಹನಿಗಡಿಯದ ಮಳೆಯ , ಆಟಿಕತ್ತಲು ಕಳೆದು , ಸೋಣೇ ತಿಂಗಳು ಬಂದದ್ದೇ ಇದಕ್ಕೆ ಕಾರಣ. ಪ್ರಕೃತಿರಂಗ ಬದಲಾದಂತೆ ಜನಜೀವನವೂ ಸಂಭ್ರಮಿಸುತ್ತದೆ ....
ಮನೆಯ ಮುತ್ತೈದೆ ಮುಂಜಾವದಲ್ಲಿ ಮಿಂದು, ದೇವರಕೋಣೆ ಹೊಕ್ಕು, ಹೊರಮುಖವಾಗಿ ಕುಳಿತು ಹೊಸ್ತಿಲು ತೊಳೆಯುತ್ತಾಳೆ.ತಲೆಮಾರು ದಾಟಿ ಬಂದ ಗೆರಟೆಯಲ್ಲಿ ಕದಡಿಟ್ಟ ಸೇಡಿಹುಡಿಗೆ ನೀರು ಬೆರೆಸಿ ಹದ ಮಾಡುತ್ತಾಳೆ. ನೆಣೆವಸ್ತ್ರದಿಂದ ಮಾಡಿದ ಬತ್ತಿಯನ್ನು ಅದಕ್ಕೆ ಅದ್ದಿ , ಹೊಸ್ತಿಲಿಗೆ ಬರೆಯುತ್ತಾಳೆ.
ನಿಶ್ಚಿತ ವಿನ್ಯಾಸಗಳಿಂದ ಅಲಂಕರಿಸಿದ ಹೊಸಿಲಿನ ಮೇಲೆ ಗಂಧಾಕ್ಷತೆಗಳನ್ನಿಟ್ಟು , ನೀರುಕಡ್ಡಿ ,ಕೆರೆಮಣೆ ಹೂವುಗಳಿಂದ ಪೂಜಿಸುತ್ತಾಳೆ. ಮುನ್ನಾದಿನವೇ ಸುಟ್ಟು - ಹುರಿದು , ಸುಲಿದಿಟ್ಟ ಹಲಸಿನ ಬೇಳೆ - ಗೇರುಬೀಜಗಳನ್ನೂ , ಒಂದು ಗಿಂಡಿ ನೀರನ್ನೂ ಇಟ್ಟು ನಮಸ್ಕರಿಸುತ್ತಾಳೆ.
ತಾನು ಹೊಕ್ಕ ಮನೆ - ತನ್ನ ಮನೆ - ಸೌಭಾಗ್ಯ ಸ್ಥಿರವಾಗಲಿ.
ಮನೆಯ ಇನ್ನುಳಿದವರು ಇವಳು ಏಳುವುದನ್ನೇ ಕಾಯುತ್ತಾರೆ ... ಗಮಗಮಿಸುವ ಗೇರುಬೀಜ , ಬೇಳೆಗಳನ್ನು ಲಪಟಾಯಿಸಬೇಕಲ್ಲ !
ನಿತ್ಯ ಹೊಸ್ತಿಲಿಗೆ ಬರೆದು ಕೈ ಮುಗಿಯಬೇಕು. ಮನೆಯ ಗೃಹಿಣಿಗೆ ಮಾಡಿ ಮುಗಿಯದಷ್ಟು ಕೆಲಸ ಉಂಟಲ್ಲ . ಹಾಗಾಗಿ ಸಿಂಹ ಮಾಸದಲ್ಲಿ ಕಡ್ಡಾಯ.
ಅಬ್ಬೆಯೂ ಇದನ್ನು ಆಚರಿಸುತ್ತಿದ್ದರು. ಮಾತ್ರವಲ್ಲದೆ ತಿಂಗಳಿಗೆ ನಾಲ್ಕು ದಿನ ಯಾರನ್ನೂ ಮುಟ್ಟಿಸಿಕೊಳ್ಳದೆ , ದೂರ ಮಲಗುತ್ತಿದ್ದಳು.
ಕುತೂಹಲದ ಪ್ರಶ್ನೆಗೆ ಸಿದ್ಧ ಉತ್ತರವೂ ಇತ್ತು ..
ಅವಳನ್ನು ಕಾಗೆ ಮುಟ್ಟಿದೆ. ಹತ್ತಿರ ಹೋದರೆ ಸ್ನಾನ ಮಾಡಲೇ ಬೇಕು .
ಆ ದಿನಗಳಲ್ಲಿ ಹಿರಿಯಕ್ಕನದ್ದೇ ಅಡುಗೆ.
ಅಪ್ಪ- ಅಣ್ಣಂದಿರಿಗೆ ಹಿತವಾಗುವಂತೆ , ತಮ್ಮ - ತಂಗಿಯರಿಗೆ ಇಷ್ಟ ಆಗುವಂತೆ ಸುಧಾರಿಸುವುದೇನು ಸುಲಭವೇ ? ಮನೆಯೊಂದು ರಣರಂಗ !
ಐದನೇ ದಿನ ಇದಕ್ಕೆಲ್ಲ ಕೊನೆ -
ನಸುಕಿನಲ್ಲಿ ಮಕ್ಕಳು ಎದ್ದೇಳುವಾಗಲೇ ಅಮ್ಮ ಕೆರೆಯಿಂದ ಬರುತ್ತಿರುತ್ತಾಳೆ.
ಸ್ನಾನ ಮುಗಿಸಿ ತಲೆಗೆ ಕಟ್ಟಿದ್ದಾಳೆ . ಮಿಕ್ಕುಳಿದ ಕೂದಲಿನಲ್ಲಿ , ಗೊಂಪು ಹಾಕಿದ ಎರಪ್ಪೇ ಸೊಪ್ಪಿನ ಚೂರು ಸಿಕ್ಕಿ ನೇತಾಡುತ್ತಿದೆ. ತುಂಡು ಸೀರೆಯುಟ್ಟವಳ ಒಂದು ಕೈಯಲ್ಲಿ ಚೆಂಬು ಗ್ಲಾಸು .ಇನ್ನೊಂದು ತೋಳಿನಲ್ಲಿ - ತೊಳೆದು ನೀರಿಳಿಯುತ್ತಿರುವ ಕಂಬಳಿ , ಹೊದಿಕೆ , ಚಾಪೆ ,ಸೀರೆಗಳಿವೆ .
ನಾಕೈದು ದಿನ ದೂರವಿದ್ದ ಮಕ್ಕಳು , ಅಬ್ಬೆಯನ್ನು ಮೊದಲು ಮುಟ್ಟುವುದು , ನಾನು - ತಾನೆಂದು ಓಡುತ್ತವೆ.
ಅವರನ್ನು ಸುಧಾರಿಸಿಕೊಂಡು ದೇವರೊಳ ಹೊಕ್ಕ ಅಮ್ಮ , ಹೊಸ್ತಿಲಿಗೆ ಬರೆದು - ಅಡ್ಡಬಿದ್ದು , ಹಣೆಗಿರಿಸಿಕೊಂಡು ಹೊರಬರುತ್ತಾಳೆ...
ತೇಯ್ದು ಹಚ್ಚಿದ ಹಸೀ ಅರಸಿನ , ಹುಬ್ಬಿನ ಮಧ್ಯೆ - ಹೊಳೆವ ಕುಂಕುಮ , ತಿಂಗಳಬೆಳಕಿನಂಥಾ ಮುಗುಳ್ನಗೆಯಿಂದ ಬೆಳಗುವ ದುಂಡು ಮುಖ ....
ಮಕ್ಕಳ ತಾಯಿ ಪುನಃ ಅಟ್ಟುಂಬೊಳವನ್ನು ಹೊಗುತ್ತಾಳೆ.
ಕಡುಕಷ್ಟದ ಕರ್ಕಾಟಕ ಕಳೆದು , ಸುಭಿಕ್ಷದ ಸಿಂಹಮಾಸ ತೊಡಗುತ್ತದೆ .
ಈಗಿನ ಹೆಮ್ಮಕ್ಕಳನ್ನು ಕಾಗೆ ಮುಟ್ಟುವುದಿಲ್ಲ.
ಡೋರ್- ಬಾಗಿಲಿನ ಮನೆಗೆ ಹೊಸ್ತಿಲೂ ಇಲ್ಲ.
ಪನೆಯಾಲ ರವಿರಾಜ
16 - 8 - 2020
ಇದನ್ನು ಓದುವಾಗ ನನ್ನ ಅಮ್ಮನ ನೆನಪಾಯಿತು.
ReplyDeletePaneyala atteya nempaathu...
ReplyDelete