ಪಡಿಮಂಚವನ್ನೇರಿದರೆ ರಂಗವನ್ನೆಲ್ಲ ಆವರಿಸುವ, ಗಂಭೀರ ಸ್ವಭಾವ - ಸೌಷ್ಟವ - ಶಾರೀರ..
ಮುಮ್ಮೇಳದತ್ತ ಸದಾ ನೆಟ್ಟಿರುವ ದೃಷ್ಟಿ ಸೂಕ್ಷ್ಮತೆ ..
ರಂಗದಲ್ಲಿರುವಾಗ ಚೆಲ್ಲಾಟ - ಪಟ್ಟಾಂಗಗಳಿಲ್ಲದ ಸ್ಥಾನ ಪ್ರಜ್ಞೆ ..
ವ್ಯಂಗ್ಯ ವಿನೋದ , ಹಾಸ್ಯ ವಿಡಂಬನೆಗಳನ್ನು ತಾನೊಂದಾಗಿ ಸವಿಯುವ , ಕೆಲವೊಮ್ಮೆ ಗಹಗಹಿಸುವ ಮುಗ್ಧ ರಸಿಕತೆ ..
ಭಕ್ತಿ- ಕರುಣ ರಸಘಟ್ಟಗಳಲ್ಲಿ ಹಾಡುತ್ತ ಮೈಮರೆಯುವ ಭಾವನಿರ್ಭರತೆ ..
ಭಕ್ತಿ - ಕರುಣ ರಸಗಳನ್ನು ಅರ್ಥಧಾರಿ ಮಾತಿನಿಂದ ಚಿತ್ರಿಸುವಾಗ -- ಹಸುಕಂದನಿಗೆ ಹಾಲೂಡುವ ಹೆತ್ತಬ್ಬೆಯಂತೆ ನಿಶ್ಚಲನಾಗಿರುವ ರಸತಾದಾತ್ಮ್ಯ ..
ರಂಗವೇರಿದ ಮೇಲೆ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಮರೆತೇಬಿಡುವ ಮನಃಪಾಕ ..
ಅಗ್ಗದ ಜನಪ್ರಿಯತೆಗೆ,ಹಣದ ಮೋಹಕ್ಕೆ ,ವಾಟ್ಸೇಪ್ ಲೈಕುಗಳಿಗೆ ತನ್ನನ್ನೆಂದೂ ಮಾರಿಕೊಳ್ಳದ ಗಾಯನ ಸಂಸ್ಕಾರ ..
ಇತ್ಯಾದಿ ಗುಣಗಣಗಳಿಂದ ನೀವು ಅತಿ ಶ್ರೀಮಂತರು ಭಾಗವತರೇ .
ಶ್ರೀ ಎಡನೀರು ಮೇಳದಲ್ಲಿ ನಿಮ್ಮೊಂದಿಗೆ ನಾನೂ ರಂಗವೇರಿದೆ. ಆ ಹತ್ತು ವರ್ಷಗಳು , ಶ್ರೀಮದೆಡನೀರಿನ ನಮ್ಮ ಸ್ವಾಮೀಜಿ, ನನಗೆ ಕೊಡಮಾಡಿದ ಮಹಾದಾನ .
ನನ್ನ ಬದುಕಿನ ಆ ಸುವರ್ಣ ಕಾಲದಲ್ಲಿ ನನಗೆ ತಿಳಿದಂತೆ ಕುಣಿದೆ - ಹಾರಿದೆ - ಹಾಡಿದೆ - ನಗಾಡಿದೆ - ಕಣ್ಣೀರಿಟ್ಟೆ .
ನಾನುಂಡ ಆ ರಂಗಸುಖಕ್ಕೆ, ಸವಿದ ವಾತ್ಸಲ್ಯಕ್ಕೆ ಪ್ರತಿಯಾಗಿ ನಾನೇನು ಕೊಟ್ಟೇನು !
ನಾನು ಬಡವ ಭಾಗವತರೇ.
ರಾಗತಾಳಗನ್ನರಿಯದ ಪಾಮರನ ನಾಡಿನರಗಳಲ್ಲೂ ಸಂಚರಿಸಿ,ಅವಾಚ್ಯ ಆನಂದವನ್ನು - ಸುಖದ ನೋವನ್ನೂ ಉಕ್ಕಿಸುವ , ನಿಮ್ಮ ಗಾಯನಗಂಗೆಯಲ್ಲಿ ಮಿಂದೇನು ಮಾತ್ರ.
ಕಲಾವಿದರನ್ನೂ ಕಲಾಸಕ್ತ ಶಿಷ್ಯರನ್ನೂತಾಯಿಯಾಗಿ ಪೋಷಿಸುವ , ತಂದೆಯಂತೆ ರಕ್ಷಿಸುವ ಶ್ರೀಮದೆಡನೀರು ಪಾದಂಗಳವರು - " ದಿನೇಶ ನಮ್ಮ ಶಿಷ್ಯ " ಎಂದಾಡಿದ ವಚನಮಾಲಿಕೆಯಿಂದ ಸಂಮಾನಿತರು ನೀವು -- ನಿಜಭಾಗ್ಯಶಾಲಿ.
ನಿಮಗೀಗ ಷಷ್ಟ್ಯಬ್ದಿ ಪೂರ್ತಿ .. ಅದು ನಮ್ಮ ಸಂಭ್ರಮ.
ನಮ್ಮ ಮನದಮನೆಯೊಳಗೆ ನಿಮಗಾಗಿ ಕಾದಿರುವ ಮನ್ನಣೆಯ ಮಣೆಯಿದೆ ..
ಮರೆಯದಿರಿ .
ಅಭಿವಾದನಗಳು.
ಪನೆಯಾಲ ರವಿ.
4 - 10 - 2019
No comments:
Post a Comment