Monday, October 28, 2019

           ಮಕ್ಕಳ ಹಬ್ಬ

ನರಕಚತುರ್ದಶಿಯಂದು ಎಡನೀರು ಸಂಸ್ಥಾನದಲ್ಲಿ ಎಣ್ಣೆಹಬ್ಬ.
ಪ್ರಾತ:ಪೂಜೆ ಮುಗಿಸಿ ಬಂದ  ಶ್ರೀಮದೆಡನೀರು ಕೇಶವಾನಂದ ಭಾರತೀ ಸ್ವಾಮಿಗಳು, ಮಠದ ಮುಂಭಾಗದಲ್ಲಿ ಆಸೀನರಾಗುತ್ತಾರೆ .
ಮುಂಜಾವದ ಐದು ಗಂಟೆ ಆಸುಪಾಸಿನ ಮುಹೂರ್ತ.
ಊರ - ಪರವೂರ ಭಕ್ತಾದಿಗಳು ,ಕಲಾವಿದರು ಬಂದಿರುತ್ತಾರೆ - ಬರುತ್ತಾರೆ , ಬರುತ್ತಲೂ ಇರುತ್ತಾರೆ.

ನಮಸ್ಕರಿಸಿದ ಶಿಷ್ಯರು , ಹಾಸಿದ ಒಲಿಚಾಪೆಯ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ತಲೆಗೆ ಮಂತ್ರಾಕ್ಷತೆ ಹಾಕಿದ ಶ್ರೀಪಾದಂಗಳು ಕೇಳುತ್ತಾರೆ -
ಎಳ್ಳೆಣ್ಣೆಯೋ
ತೆಂಗಿನೆಣ್ಣೆಯೋ
ಕಾಸಿದೆಣ್ಣೆಯೋ ...
ಶೀತ ಪ್ರಕೃತಿಯವರು ಕಾಸಿದೆಣ್ಣೆ ಬಯಸುತ್ತಾರೆ.
ಎತ್ತಿದ ಸೌಟಿನಿಂದ
ನೆತ್ತಿಗೆ ಎಣ್ಣೆಯ ಧಾರೆ ..
ಜೊತೆಗೆ ಒಬ್ಬರಿಗೊಂದು ಸಾಬೂನು.
ಹಾಸ್ಯ ವಿನೋದಗಳಿಂದ ಸನ್ನಿವೇಶ ರಸಮಯವಾಗುತ್ತದೆ.
ಬದುಕಿನ ಜಂಜಡ ಮರೆಸುತ್ತದೆ.

ಸ್ನಾನ ಮಾಡಿ ಬಂದು , ಪೂಜೆ ನೋಡಿ ಪ್ರಸಾದ ಸ್ವೀಕರಿಸಿದ ಮೇಲೆ . ಬೆಳಗಿನ ತಿಂಡಿ -
ದೋಸೆ , ಚಟ್ಣಿ ,ಬೆಲ್ಲದರವೆ , ವಡೆ , ಸಾಂಬಾರು , ಹಲುವ ,ಮೊಸರು , ಉಪ್ಪಿನಕಾಯಿ ...
ಹೊಟ್ಟೆತುಂಬ.
ಕೆಲವೊಮ್ಮೆ ಶ್ರೀಪಾದಂಗಳೇ ಬಂದು , ಒತ್ತಾಯದಿಂದ ದೋಸೆ ಹಾಕಿಸುವುದೂ ಉಂಟು .

ಸೌಟಿನಿಂದಿಳಿಯುವ ತೈಲಧಾರೆಗೆ ಹನ್ನೊಂದು ವರ್ಷಗಳಿಂದ ತಲೆಯೊಡ್ಡುತ್ತೇನೆ.
ಬಾಗಿ ಕುಳಿತು ಕಣ್ಣು ಮುಚ್ಚುತ್ತೇನೆ ...

ಆರುಮೆಟ್ಟಲಿನ ಎತ್ತರದ ಹಳೇಮನೆ .
ಬಾಗಿಲಿಗೆ ಒರಗಿ , ಕೈಯಲ್ಲಿ ಎಣ್ಣೆ ಕುಜುಳಿ ಹಿಡಿದ ಹೆಣ್ಣುಜೀವವೊಂದು ಕಾಣುತ್ತದೆ .
ಕರೆಯುವುದು ಕೇಳ್ತದೆ -

" ಎಣ್ಣೆಪಸೆ ಇಲ್ಲದೆ ಮೈ - ಕೈ ಎಲ್ಲಾ ಬೂದಿ ಕಾರ್ತದೆ .
ಬಾ ಗುಡ್ಡಾ ..
ಸ್ವಲ್ಪ ಎಣ್ಣೆ ಹಚ್ತೇನೆ .. "

" ನಂಗೆ ಎಣ್ಣೆ ಬೇಡಾ ... "
ಅವಳ ಕೈಗೆ ಸಿಗದೆ ಓಟ ಹೊಡೆಯುವ ಅವನಿಗೆ ಗೊತ್ತು - ಅಬ್ಬೆ ಪಾಪ .. ಅಟ್ಟಸಿಕೊಂಡು ಬರ್ಲಿಕ್ಕಿಲ್ಲ .

ಬಾಗಿ , ಕಣ್ಮುಚ್ಚಿ ಕುಳಿತ ಬೆಳೆದ ಮಗುವಿನ ನೆತ್ತಿಗೆ ಎಡನೀರು ಶ್ರೀಗಳು ಎಣ್ಣೆಹೊಯ್ಯುತ್ತಾರೆ.
ತಲೆಗೆರೆದ ಎಣ್ಣೆ - ಕೆಳಗೆ ಇಳಿಯದಿರುವುದಿಲ್ಲ!
ಮೈಯಿಡೀ ಹರಡಿಕೊಳ್ಳುತ್ತದೆ.

ಪನೆಯಾಲ ರವಿ
28- 10 - 2019

Friday, October 4, 2019

ಗಾನಕೋಗಿಲೆಯೊಡನೆ ಸ್ವಗತ .



    ಪಡಿಮಂಚವನ್ನೇರಿದರೆ ರಂಗವನ್ನೆಲ್ಲ ಆವರಿಸುವ, ಗಂಭೀರ ಸ್ವಭಾವ - ಸೌಷ್ಟವ - ಶಾರೀರ..
ಮುಮ್ಮೇಳದತ್ತ ಸದಾ ನೆಟ್ಟಿರುವ ದೃಷ್ಟಿ ಸೂಕ್ಷ್ಮತೆ ..
ರಂಗದಲ್ಲಿರುವಾಗ ಚೆಲ್ಲಾಟ - ಪಟ್ಟಾಂಗಗಳಿಲ್ಲದ ಸ್ಥಾನ ಪ್ರಜ್ಞೆ ..
ವ್ಯಂಗ್ಯ  ವಿನೋದ , ಹಾಸ್ಯ ವಿಡಂಬನೆಗಳನ್ನು ತಾನೊಂದಾಗಿ ಸವಿಯುವ , ಕೆಲವೊಮ್ಮೆ ಗಹಗಹಿಸುವ ಮುಗ್ಧ ರಸಿಕತೆ ..
ಭಕ್ತಿ- ಕರುಣ ರಸಘಟ್ಟಗಳಲ್ಲಿ ಹಾಡುತ್ತ ಮೈಮರೆಯುವ ಭಾವನಿರ್ಭರತೆ ..
ಭಕ್ತಿ - ಕರುಣ ರಸಗಳನ್ನು ಅರ್ಥಧಾರಿ ಮಾತಿನಿಂದ ಚಿತ್ರಿಸುವಾಗ --  ಹಸುಕಂದನಿಗೆ ಹಾಲೂಡುವ ಹೆತ್ತಬ್ಬೆಯಂತೆ ನಿಶ್ಚಲನಾಗಿರುವ ರಸತಾದಾತ್ಮ್ಯ ..
ರಂಗವೇರಿದ ಮೇಲೆ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಮರೆತೇಬಿಡುವ ಮನಃಪಾಕ ..
ಅಗ್ಗದ ಜನಪ್ರಿಯತೆಗೆ,ಹಣದ ಮೋಹಕ್ಕೆ ,ವಾಟ್ಸೇಪ್ ಲೈಕುಗಳಿಗೆ ತನ್ನನ್ನೆಂದೂ ಮಾರಿಕೊಳ್ಳದ ಗಾಯನ ಸಂಸ್ಕಾರ ..
                   ಇತ್ಯಾದಿ ಗುಣಗಣಗಳಿಂದ ನೀವು ಅತಿ ಶ್ರೀಮಂತರು ಭಾಗವತರೇ .
       ಶ್ರೀ ಎಡನೀರು ಮೇಳದಲ್ಲಿ ನಿಮ್ಮೊಂದಿಗೆ ನಾನೂ ರಂಗವೇರಿದೆ. ಆ ಹತ್ತು ವರ್ಷಗಳು , ಶ್ರೀಮದೆಡನೀರಿನ ನಮ್ಮ ಸ್ವಾಮೀಜಿ, ನನಗೆ ಕೊಡಮಾಡಿದ ಮಹಾದಾನ .
ನನ್ನ ಬದುಕಿನ ಆ ಸುವರ್ಣ ಕಾಲದಲ್ಲಿ ನನಗೆ ತಿಳಿದಂತೆ ಕುಣಿದೆ - ಹಾರಿದೆ - ಹಾಡಿದೆ - ನಗಾಡಿದೆ - ಕಣ್ಣೀರಿಟ್ಟೆ .
    ನಾನುಂಡ ಆ ರಂಗಸುಖಕ್ಕೆ, ಸವಿದ ವಾತ್ಸಲ್ಯಕ್ಕೆ ಪ್ರತಿಯಾಗಿ ನಾನೇನು ಕೊಟ್ಟೇನು !
    ನಾನು ಬಡವ ಭಾಗವತರೇ.
ರಾಗತಾಳಗನ್ನರಿಯದ ಪಾಮರನ ನಾಡಿನರಗಳಲ್ಲೂ ಸಂಚರಿಸಿ,ಅವಾಚ್ಯ ಆನಂದವನ್ನು - ಸುಖದ ನೋವನ್ನೂ ಉಕ್ಕಿಸುವ , ನಿಮ್ಮ ಗಾಯನಗಂಗೆಯಲ್ಲಿ ಮಿಂದೇನು ಮಾತ್ರ.

ಕಲಾವಿದರನ್ನೂ ಕಲಾಸಕ್ತ ಶಿಷ್ಯರನ್ನೂತಾಯಿಯಾಗಿ ಪೋಷಿಸುವ , ತಂದೆಯಂತೆ ರಕ್ಷಿಸುವ ಶ್ರೀಮದೆಡನೀರು ಪಾದಂಗಳವರು - " ದಿನೇಶ ನಮ್ಮ ಶಿಷ್ಯ " ಎಂದಾಡಿದ ವಚನಮಾಲಿಕೆಯಿಂದ ಸಂಮಾನಿತರು ನೀವು  -- ನಿಜಭಾಗ್ಯಶಾಲಿ.
ನಿಮಗೀಗ ಷಷ್ಟ್ಯಬ್ದಿ ಪೂರ್ತಿ .. ಅದು ನಮ್ಮ ಸಂಭ್ರಮ.

  ನಮ್ಮ ಮನದಮನೆಯೊಳಗೆ ನಿಮಗಾಗಿ ಕಾದಿರುವ ಮನ್ನಣೆಯ ಮಣೆಯಿದೆ ..
                                       ಮರೆಯದಿರಿ .
                                                           ಅಭಿವಾದನಗಳು.

ಪನೆಯಾಲ ರವಿ.
4 - 10 - 2019