Sunday, August 16, 2020

ಸಂಕ್ರಮಣ .

   ಹೂಬಿಸಿಲು ಕಾಣುತ್ತದೆ.ಹದವಾದ ಗಾಳಿಗೆ ಹೂಬಳ್ಳಿಗಳು ತಲೆಯೆತ್ತುತ್ತಿವೆ.ದುಂಬಿ - ಜೇನ್ನೊಣ - ಹಕ್ಕಿಗಳ ಹಾಡು ಸಂಗೀತಮಯವಾಗಿದೆ. ಪ್ರಕೃತಿಗೇ ಉಲ್ಲಾಸ ಬಂದಿದೆ.
   ಹನಿಗಡಿಯದ ಮಳೆಯ , ಆಟಿಕತ್ತಲು ಕಳೆದು , ಸೋಣೇ ತಿಂಗಳು ಬಂದದ್ದೇ ಇದಕ್ಕೆ ಕಾರಣ. ಪ್ರಕೃತಿರಂಗ ಬದಲಾದಂತೆ  ಜನಜೀವನವೂ ಸಂಭ್ರಮಿಸುತ್ತದೆ ....
     ಮನೆಯ ಮುತ್ತೈದೆ ಮುಂಜಾವದಲ್ಲಿ ಮಿಂದು, ದೇವರಕೋಣೆ ಹೊಕ್ಕು, ಹೊರಮುಖವಾಗಿ ಕುಳಿತು ಹೊಸ್ತಿಲು ತೊಳೆಯುತ್ತಾಳೆ.ತಲೆಮಾರು ದಾಟಿ ಬಂದ ಗೆರಟೆಯಲ್ಲಿ ಕದಡಿಟ್ಟ ಸೇಡಿಹುಡಿಗೆ ನೀರು ಬೆರೆಸಿ ಹದ ಮಾಡುತ್ತಾಳೆ. ನೆಣೆವಸ್ತ್ರದಿಂದ ಮಾಡಿದ ಬತ್ತಿಯನ್ನು ಅದಕ್ಕೆ ಅದ್ದಿ , ಹೊಸ್ತಿಲಿಗೆ ಬರೆಯುತ್ತಾಳೆ.
    ನಿಶ್ಚಿತ ವಿನ್ಯಾಸಗಳಿಂದ ಅಲಂಕರಿಸಿದ ಹೊಸಿಲಿನ ಮೇಲೆ ಗಂಧಾಕ್ಷತೆಗಳನ್ನಿಟ್ಟು , ನೀರುಕಡ್ಡಿ ,ಕೆರೆಮಣೆ ಹೂವುಗಳಿಂದ ಪೂಜಿಸುತ್ತಾಳೆ. ಮುನ್ನಾದಿನವೇ ಸುಟ್ಟು - ಹುರಿದು , ಸುಲಿದಿಟ್ಟ ಹಲಸಿನ ಬೇಳೆ - ಗೇರುಬೀಜಗಳನ್ನೂ , ಒಂದು ಗಿಂಡಿ ನೀರನ್ನೂ ಇಟ್ಟು ನಮಸ್ಕರಿಸುತ್ತಾಳೆ.
           ತಾನು ಹೊಕ್ಕ ಮನೆ - ತನ್ನ ಮನೆ - ಸೌಭಾಗ್ಯ ಸ್ಥಿರವಾಗಲಿ.
     ಮನೆಯ ಇನ್ನುಳಿದವರು ಇವಳು ಏಳುವುದನ್ನೇ ಕಾಯುತ್ತಾರೆ ... ಗಮಗಮಿಸುವ ಗೇರುಬೀಜ , ಬೇಳೆಗಳನ್ನು ಲಪಟಾಯಿಸಬೇಕಲ್ಲ !
     ನಿತ್ಯ ಹೊಸ್ತಿಲಿಗೆ ಬರೆದು ಕೈ ಮುಗಿಯಬೇಕು. ಮನೆಯ ಗೃಹಿಣಿಗೆ ಮಾಡಿ ಮುಗಿಯದಷ್ಟು ಕೆಲಸ ಉಂಟಲ್ಲ . ಹಾಗಾಗಿ ಸಿಂಹ ಮಾಸದಲ್ಲಿ ಕಡ್ಡಾಯ.
     
         ಅಬ್ಬೆಯೂ ಇದನ್ನು ಆಚರಿಸುತ್ತಿದ್ದರು. ಮಾತ್ರವಲ್ಲದೆ  ತಿಂಗಳಿಗೆ ನಾಲ್ಕು ದಿನ ಯಾರನ್ನೂ ಮುಟ್ಟಿಸಿಕೊಳ್ಳದೆ , ದೂರ ಮಲಗುತ್ತಿದ್ದಳು.
  ಕುತೂಹಲದ ಪ್ರಶ್ನೆಗೆ ಸಿದ್ಧ ಉತ್ತರವೂ ಇತ್ತು .. 
ಅವಳನ್ನು ಕಾಗೆ ಮುಟ್ಟಿದೆ. ಹತ್ತಿರ ಹೋದರೆ ಸ್ನಾನ ಮಾಡಲೇ ಬೇಕು .
ಆ ದಿನಗಳಲ್ಲಿ ಹಿರಿಯಕ್ಕನದ್ದೇ ಅಡುಗೆ.
 ಅಪ್ಪ- ಅಣ್ಣಂದಿರಿಗೆ ಹಿತವಾಗುವಂತೆ , ತಮ್ಮ - ತಂಗಿಯರಿಗೆ ಇಷ್ಟ ಆಗುವಂತೆ ಸುಧಾರಿಸುವುದೇನು ಸುಲಭವೇ ? ಮನೆಯೊಂದು ರಣರಂಗ !
  ಐದನೇ ದಿನ ಇದಕ್ಕೆಲ್ಲ ಕೊನೆ - 
ನಸುಕಿನಲ್ಲಿ ಮಕ್ಕಳು ಎದ್ದೇಳುವಾಗಲೇ ಅಮ್ಮ ಕೆರೆಯಿಂದ ಬರುತ್ತಿರುತ್ತಾಳೆ.
    ಸ್ನಾನ ಮುಗಿಸಿ ತಲೆಗೆ ಕಟ್ಟಿದ್ದಾಳೆ . ಮಿಕ್ಕುಳಿದ ಕೂದಲಿನಲ್ಲಿ , ಗೊಂಪು ಹಾಕಿದ ಎರಪ್ಪೇ ಸೊಪ್ಪಿನ ಚೂರು ಸಿಕ್ಕಿ ನೇತಾಡುತ್ತಿದೆ. ತುಂಡು ಸೀರೆಯುಟ್ಟವಳ ಒಂದು ಕೈಯಲ್ಲಿ ಚೆಂಬು ಗ್ಲಾಸು .ಇನ್ನೊಂದು ತೋಳಿನಲ್ಲಿ - ತೊಳೆದು ನೀರಿಳಿಯುತ್ತಿರುವ  ಕಂಬಳಿ , ಹೊದಿಕೆ , ಚಾಪೆ ,ಸೀರೆಗಳಿವೆ .
   ನಾಕೈದು ದಿನ ದೂರವಿದ್ದ ಮಕ್ಕಳು , ಅಬ್ಬೆಯನ್ನು ಮೊದಲು ಮುಟ್ಟುವುದು , ನಾನು - ತಾನೆಂದು ಓಡುತ್ತವೆ.
ಅವರನ್ನು ಸುಧಾರಿಸಿಕೊಂಡು ದೇವರೊಳ  ಹೊಕ್ಕ ಅಮ್ಮ , ಹೊಸ್ತಿಲಿಗೆ ಬರೆದು - ಅಡ್ಡಬಿದ್ದು , ಹಣೆಗಿರಿಸಿಕೊಂಡು ಹೊರಬರುತ್ತಾಳೆ...   
           
           ತೇಯ್ದು ಹಚ್ಚಿದ ಹಸೀ ಅರಸಿನ , ಹುಬ್ಬಿನ ಮಧ್ಯೆ - ಹೊಳೆವ ಕುಂಕುಮ , ತಿಂಗಳಬೆಳಕಿನಂಥಾ ಮುಗುಳ್ನಗೆಯಿಂದ ಬೆಳಗುವ ದುಂಡು ಮುಖ ....
  ಮಕ್ಕಳ ತಾಯಿ ಪುನಃ ಅಟ್ಟುಂಬೊಳವನ್ನು ಹೊಗುತ್ತಾಳೆ.

  ಕಡುಕಷ್ಟದ ಕರ್ಕಾಟಕ ಕಳೆದು , ಸುಭಿಕ್ಷದ ಸಿಂಹಮಾಸ ತೊಡಗುತ್ತದೆ .
             ಈಗಿನ ಹೆಮ್ಮಕ್ಕಳನ್ನು ಕಾಗೆ ಮುಟ್ಟುವುದಿಲ್ಲ.
             ಡೋರ್- ಬಾಗಿಲಿನ ಮನೆಗೆ ಹೊಸ್ತಿಲೂ ಇಲ್ಲ.

       ಪನೆಯಾಲ ರವಿರಾಜ
       16 - 8 - 2020

Wednesday, August 12, 2020

ಸ್ವಗತ ...

         

       ' ಲಾಕ್ ಡೌನ್ ' 
ಹುಟ್ಟಿದಾರಭ್ಯ ಕೇಳದ ಪದ ! ಸ್ವಗೃಹದಲ್ಲಿ ಸ್ವಯಂ ಬಂಧನ.  ಹೊಣೆಯರಿತು ಒಡ್ಡಿಕೊಳ್ಳಬೇಕಾದ ಸೆರೆವಾಸ.
    ಮಾರ್ಚ್ ೬ / ೭ ನನ್ನಣ್ಣನ ವರ್ಷಾಂತ. ಅವ ತೀರಿಕೊಂಡು ಒಂದು ವರ್ಷ ಆಯ್ತು.
ಹೋಗಲೇ ಬೇಕು ..
ಸರಿ.
ಹೋಗುವುದು ಹೇಗೆ ?
ಈಗ ನನ್ನ ವಸತಿ ಕರ್ನಾಟಕದಲ್ಲಿ . ಹೋಗಬೇಕಾದ್ದು ಕೇರಳದ ಪನೆಯಾಲಕ್ಕೆ .ಕೇರಳ ಕರ್ನಾಟಕದ ಗಡಿ ಮುಚ್ಚಿದೆ , ಪೋಲೀಸ್ ಪಹರೆ ಇದೆ . ದಾಟುವಂತಿಲ್ಲ.
  ಪರಿಚಿತ ಪೋಲೀಸೊಬ್ಬರಿಗೆ ಫೋನ್ ಮಾಡಿ ಕೇಳಿದೆ -
" ಯಾವ ಕಾರಣಕ್ಕೂ ಬಿಡುವಂತಿಲ್ಲ ಸರ್,
 ಮತ್ತೆ - ನಿಮಗೆ ಧೈರ್ಯ ಇದ್ರೆ -  ಕಾಡದಾರಿ ಅಲ್ವಾ , ೪ ಕಿಮೀ ನಡೆದು ಹೋಗಿ ಬಿಡಿ , ನೀವೆಂತ ಅಪಾಯಕಾರಿ ಅಲ್ವಲ್ಲ."
  ಆಸೆ ಹುಟ್ಟಿತು .. ಅಣ್ಣನ ದಿನದಲ್ಲಿ ಪಾಲ್ಗೊಳ್ಳಬಹುದು , ಅತ್ತಿಗೆಯ ಕಾಲಿಗೆ ಬೀಳಬಹುದು , ಅಣ್ಣನ ಮಕ್ಕಳ ತಲೆಗೆರಡು ಅಕ್ಷತೆ ಹಾಕಬಹುದು ...
      ಆದರೆ ಅತಿಕ್ರಮಣ ...
ದೇಶಕ್ಕೆ ಬಂದ  ಆಪತ್ತನ್ನು ಇದಿರಿಸುವುದಕ್ಕಾಗಿ, ಆಳುವ ಪ್ರಭು ಮಾಡಿದ ದಿಗ್ಬಂಧ. ಉಲ್ಲಂಘಿಸಬಹುದೇ ?
      ಇಲ್ಲ ನಾನು ಹೋಗಲಿಲ್ಲ ..
ಎಳವೆಯಿಂದ ನನ್ನನ್ನು ಪೋಷಿಸಿ ಬೆಳೆಸಿದ, ನನ್ನಣ್ಣನ ತಿಥಿಕಾರ್ಯಗಳಿಗೆ ನಾನು ಹೋಗದೇ ಉಳಿದೆ.

ನಾನು ಶ್ರೀಕಟೀಲು ಮೇಳದ ಕಸುಬುಧಾರಿ.
  ಹಿಮ್ಮೇಳವಿರಲಿ ಮುಮ್ಮೇಳವಿರಲಿ - ಝಗಮಗಿಸುವ ರಂಗವೇರಿದರೆ ಒಂದು ಭ್ರಾಂತಿ ಆವರಿಸುವುದಿದೆ .ತಾನು ನಿರ್ವಹಿಸುವ ಪೌರಾಣಿಕ ಪಾತ್ರಗಳ ಗುಂಗು , ಹಗಲಾದರೂ ಇಳಿಯದೆ ,ಹಾದಿಗೆಡಿಸುವ ಅಮಲು ಅದು.! ಆ ವಿಷ ಬೀಜಕ್ಕೆ ಈಗಿನ ಕೆಲವು ವಾಟ್ಸೇಪ್ ಕಲಾಭಿಮಾನಿಗಳು, ನೀರುಣಿಸುತ್ತಲೂ ಇರುತ್ತಾರೆ.
ಸ್ಟೇಜಿನ ಮುಂದಿರುವವರೆಲ್ಲ ನನ್ನ ಆರಾಧಕರು , ಇತರ ನರಮನುಷ್ಯರಿಗಿಂತ ತಾನೇ ಶ್ರೇಷ್ಠನೆಂದು ತಲೆಯೆತ್ತಿ ನಡೆಯುತ್ತಿದ್ದೆ ...
   ವೈರಾಣುವೊಂದು ಧುತ್ತನೆ ಮುಂದೆ ನಿಂದು ಅಬ್ಬರಿಸಿತು .ನೀನಿಷ್ಟೇ ಎಂದು ಬೆಟ್ಟುಮಾಡಿ ತೋರಿಸಿತು! ಭೂಪತಿ,ಸುರಪತಿ,ಅಸುರಪತಿಗಳೆಂಬ ಕೋವಿದರೆಲ್ಲ ಕೋವಿಡ್ ೧೯ ರ ಮುಂದೆ ಮಂಡಿಯೂರಿದರು !
ಭವಿಷ್ಯದ ಪ್ರಶ್ನೆಯೇ ಭೂತವಾಗಿ ಕಂಗೆಡಿಸಿತು.ಎಲ್ಲ ಕ್ಷೇತ್ರಗಳೂ ಒದ್ದಾಡಿದವು.ಬಡವನೊಂದಿಗೆ ಬಲ್ಲಿದನೂ.
     ನಾನು - ತಾನೆಂಬುದೆಲ್ಲ ಎಷ್ಟು ದುರ್ಬಲ ವಾಚಕ !

ನಿನ್ನೆಯ ಆಟಮುಗಿಸಿ ಬರುವಾಗ ಇವತ್ತಿನ ಆಟ ಇರಲಾರದೆಂಬ ನಿರ್ಣಯ ನಮಗಿರಲಿಲ್ಲ.ಮತ್ತೆ ಚೌಕಿ ಸೇರಲಿಲ್ಲ. ಬಹುವಾಗಿ ಪ್ರೀತಿಸುವ ರಂಗವನ್ನು ಹೊಗಲಿಲ್ಲ. 
ಸಹಕಲಾವಿದರಿಗೆ ವಿದಾಯಕೋರದೆ ,ಪತ್ತನಾಜೆಸೇವೆಯಂದು ಗೆಜ್ಜೆ ಬಿಚ್ಚಿ , ದೇವರ ಮುಂದಿಟ್ಟು ನಮಸ್ಕರಿಸದೆಯೇ ಬಹುಶ: ಈ ವರ್ಷದ ತಿರುಗಾಟವೇ ಮುಗಿದು ಹೋಗುತ್ತದೆ .

ನಾನು ಆಟಕ್ಕೆ ಹೋಗದೆ , ಮಗ ಪಾಠಕ್ಕೆ ಹೋಗದೆ -ಪೇಟೆಯ ಮುಖ ಕಾಣದೆ ಎರಡು ತಿಂಗಳಾಯಿತು !ತಲೆಗೂದಲು ಬೆಳೆದು ಮುಸುವನ ಹಾಗಾಗಿದೆ ! ಸ್ವಯಂ ಕೇಶಕರ್ತನ ಮಾಡುವ ಚಿತ್ರಗಳನ್ನು ನೋಡಿದ್ದೆ . ಧೈರ್ಯ ಬರಲಿಲ್ಲ .ನಮ್ಮೂರಲ್ಲೇ ಒಬ್ಬ ಹಜಾಮ ಇದ್ದಾನೆ ,ಮನೆಗೆ ಬಂದ ಸುರಕ್ಷಿತ - ಪರಿಚಿತರಿಗೆ ಕರ್ತನಸೇವೆ ಮಾಡುತ್ತಿದ್ದಾನೆಂದು ತಿಳಿಯಿತು.
   ಹೋಗೋಣವೇ .? ಸರಕಾರೀ ನಿಯಮ ಪ್ರಕಾರ ಹೋಗಕೂಡದು.
    ಬಿಎ ಪದವೀಧರನಾಗಿ,ಹವ್ಯಾಸಿ ಯಕ್ಷಗಾನ ಕಲಾವಿದನಾಗಿ,ನೇಪಥ್ಯಸಹಾಯಕನಾಗಿ ದುಡಿಯುವ ಆತನಿಗೆ ೬೦ ರ ಹರೆಯ. ಆಟ ಇಲ್ಲದೆ , ಕುಲಕಸುಬು ಮಾಡಲಾಗದ ಈ ಕಾಲದಲ್ಲಿ , ನಮ್ಮಿಬ್ಬರ ತಲೆಕೊಟ್ಟರೆ ಅವನ ನಾಲ್ಕು ದಿನದ ಖರ್ಚಿಗಾದೀತಲ್ಲವೇ ?
      ಹೋದೆವು .
" ನೀರುಮಾತ್ರ ಕೆಳಗಿಂದ ಹೊತ್ತು ತರ್ಬೇಕು ಬೇರೆ ತಾಪತ್ರಯ ಏನಿಲ್ಲ " ಎನ್ನುತ್ತಾ ನಮ್ಮನ್ನು ಸ್ವಾಗತಿಸಿದ.

ಚಿಕ್ಕ ಮನೆಯ ಪುಟ್ಟ ಅಂಗಳವೇ ಸೆಲೂನು.ನಾವು  ಕೊಂಡೊಯ್ದ ಬಟ್ಟೆಯನ್ನೇ ಹೊದೆಸಿ,ಕೂದಲು ಕತ್ತರಿಸಿ
ನಮ್ಮನ್ನು ಚಂದ ಮಾಡಿಬಿಟ್ಟ !

ಸಣ್ಣ ಮೊತ್ತವೊಂದನ್ನು ಅವನ ಕೈಯಲ್ಲಿಟ್ಟೆ . ನನ್ನಲ್ಲಿ ಇದೆ - ನಾನು ದಾತಾರ , ಎಂದು ಬಿಚ್ಚಬಹುದಾದ ನನ್ನ ಭಾವದ ಹೆಡೆಯನ್ನು ಮೆಟ್ಟಿ ನಿಂತಿದ್ದೆ.
ಸಂತೋಷದಿಂದ - ತನ್ನ ಕುಲವೃತ್ತಿಗೆ ಸಂದ ಪ್ರತಿಫಲ ಇದು , ಎಂಬ ಸ್ವಾಭಿಮಾನ ತಂದ ಸಂತಸದಿಂದ ಸ್ವೀಕರಿಸಿದ. ಎಣಿಸಿಯೂ ನೋಡದೆ ಒಳಗಿಟ್ಟ !
      ದೀನ ಯಾರು - ದಾನಿ ಯಾರು !
   ಹಗುರಾದ ತಲೆಯೊಂದಿಗೆ ಮನೆ ಸೇರಿದೆವು .

ಕೊರೋನ ತಂದ ದುರಂತ ಅಸಹನೀಯವಾದುದು 
ನಿಜ. ಅದನ್ನು ಗೆಲ್ಲಬೇಕಾದರೆ ಲಾಕ್ ಡೌನ್ ಅತ್ಯಗತ್ಯ. ತತ್ಪರಿಣಾಮಗಳು ಅನಿವಾರ್ಯ.

ಆದರೆ - 
ವಿಜೃಂಭಣೆಯ ಸಮಾರಂಭಗಳು
ಅನವಶ್ಯಕ ತಿರುಗಾಟ - ವಿಹಾರಗಳು
ಒಮ್ಮೆ ಬಾಯಾರಿದರೆ ಒಂದು ಕುಪ್ಪಿ ನೀರು ಎಂಬ ಪ್ರವೃತ್ತಿ
ಫಾಸ್ಟ್ ಫುಡ್ ವ್ಯಾಮೋಹ
ವಿನೋದದ ವಾಹನಯಾತ್ರೆಗಳು
ಮದ್ಯಪಾನ  ...
ಎಲ್ಲವೂ ಸೀಲ್ ಡೌನ್ ಆಗಿದೆ !

ಓಝೋನ್ ರಂದ್ರ ಮುಚ್ಚುತ್ತಿದೆ .. ಗಂಗೆ ತನ್ನ ಪಾಪವನ್ನು ತಾನೇ ತೊಳೆದು ಕೊಳ್ಳುತ್ತಿದ್ದಾಳೆ ...ಪರಿಸರ ಅಮಲಿನವಾಗುತ್ತಿದೆ !
ಇದು ಪ್ರಕೃತಿ ನಮಗೆ ನೀಡಿದ ಎಚ್ಚರಿಕೆ .
ನಿಸರ್ಗ ವ್ಯಗ್ರವಾದರೆ - ಮಾನವ ಒಬ್ಬಂಟಿ, ಅಸಹಾಯಕ .
ವರ್ಷದಲ್ಲಿ ಒಂದು ತಿಂಗಳಾದರೂ ದೇಶವಾಸಿಗಳೆಲ್ಲ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಆಚರಿಸುವುದು ವಿಹಿತ.
             ನಿಸರ್ಗವನ್ನು ಬೆಲೆವೆಣ್ಣಿನಂತೆ ಬಳಸದೆ,
             ಹೆತ್ತಬ್ಬೆಯಂತೆ ಗೌರವಿಸೋಣ.
ದೇಶ ಕ್ಷೋಭರಹಿತವಾಗಲಿ .
         ‌ನಮಸ್ಕಾರ .


ಪನೆಯಾಲ ರವಿರಾಜ.
ಜೋಗಿಮೂಲೆ ಮನೆ
12-8-2020

Thursday, August 6, 2020

ಪ್ರಶ್ನೆ ...

                           
                
ಈಗ ಚಿಮಿಣಿ ಎಣ್ಣೆ ಸಿಗುವುದಿಲ್ಲ.ಡೀಸೆಲ್ ದೀಪದ ಹೊಗೆಕಾರುವ ಬೆಳಕಿನಲ್ಲಿ ಬೀಡಿಕಟ್ಟಿ ಮಲಗುವಾಗ ನಡುರಾತ್ರೆ ಆಗ್ತದೆ.
  ಬೆಳಗ್ಗೆ ಮೂರೂವರೆಗೆ ಎದ್ದು ಪುನ: ಬೀಡಿಯ ಕೆಲಸ.ಏಳು - ಒಂಭತ್ತು ವರ್ಷದ ಇಬ್ಬರು ಗಂಡು ಮಕ್ಕಳಿಗೆ , ಗಂಡನಿಗೆ , ತನಗೆ ಬೆಳಗಿನ ತಿಂಡಿ ಮಾಡಿಕೊಳ್ಳಬೇಕು .
  ಮಧ್ಯಾಹ್ನ ಊಟಕ್ಕೆ ಗಂಜಿ - ಚಟ್ಣಿಯೋ ಪಲ್ಯವೋ ಸಿದ್ದ ಆಗಬೇಕು.
  ಬಾಕಿ ಮನೆಗೆಲಸ ,ಸೊಸೈಟಿ - ಅಂಗಡಿ ಜೊತೆಗೆ ಬೀಡಿ ಎಲೆ ಕತ್ತರಿಸಿಕೊಳ್ಳಬೇಕು. 
ಗಂಡ ಕೆಲಸಕ್ಕೆ ಹೋದರೆ ಹೋದ.ಏನಾದರೂ ತಂದರೆ ತಂದ.
 ಕುಡಿದು ಬಂದರೆ ಅವ ದುರ್ವಾಸ .
     ಇಬ್ಬರು ಮಕ್ಕಳೂ ಸುಮ್ಮಗಿರುವವರಲ್ಲ. ಮನೆಯ ಸುತ್ತ ಕಾಡಿನಲ್ಲಿ-
 ನೆಡುವುದು - ಕಡಿಯುವುದು - ಮೀಯುವುದು - ಜಾರುವುದು - ಏರುವುದು  ... ಅವರ ಮೇಲೆ ಸದಾ ತಾಯಿ ಕಣ್ಣು ಇರಲೇಬೇಕು.
  ಹೀಗೆ ಬದುಕಾಟ ಮಾಡುವ ಹೆಣ್ಣೊಬ್ಬಳು, ನಮ್ಮೂರಲ್ಲಿ ಇದ್ದಾಳೆ.ಬದುಕಿನ ಏಕತಾನತೆಯಿಂದ ಬೇಸತ್ತು, ನಮ್ಮಲ್ಲಿಗೆ ಒಮ್ಮೊಮ್ಮೆ ಬರುತ್ತಾಳೆ.
 ದನಗಳಿಗೆ ಹುಲ್ಲು ,ಚೂರುಪಾರು ಮನೆಗೆಲಸಗಳನ್ನು ಮಾಡಿ - ಮಾತಾಡಿ, ಹೊಟ್ಟೆತುಂಬ ಉಂಡು ಹೋಗುತ್ತಾಳೆ.
  ಮಕ್ಕಳೂ ಅಷ್ಟೇ - ಒಂದು ಪೇರಳೆ ಸಿಕ್ಕಿದರೆ ಮೂರು ತುಂಡು ಮಾಡುತ್ತವೆ.

 ಮೊನ್ನೆ - 
" ಮೊಬೈಲು ತೆಗೆಯಲು ಲೋನು ಸಿಗ್ತದಾ ಅಣ್ಣೇರೇ " ಅಂತ ನನ್ನಲ್ಲಿ ಕೇಳಿದಳು !
 ಓನ್ ಲೈನ್ ತರಗತಿಗಾಗಿ .ಕಂದಮ್ಮಗಳು ವಿದ್ಯಾವಂತರಾಗುವುದು ಅವಳ ಕನಸು .
  ಅಮೆಝಾನ್ ,ಪ್ಲಿಪ್ಕಾರ್ಟ್ , ಇ ಎಮ್ ಐ .. ಎಲ್ಲ ಉಂಟಲ್ಲ . ಆದರೆ ಅದು, ದುಡ್ಡಿದ್ದವರಿಗಾಗಿ ಮಾತ್ರ.
ಸ್ಮಾರ್ಟ್ ಫೋನಿಗೆ ಬೇಕು ಆರೇಳು ಸಾವಿರ.
     ನಾನೇನು ಅನುಕೂಲಸ್ಥನೇ! ಆದರೂ ,ಹಳತಾದರೂ ಒಂದು ಕೊಡಿಸಿದರೆ ?
  ಕರೆಂಟಿಲ್ಲದ ಮನೆ. 
ಮೊಬೈಲು ಚಾರ್ಜು ಮಾಡುವದು ಹೇಗೆ ?
ನೆಟ್ ಒಫರ್ ಹಾಕುವುದಕ್ಕೂ ಬೇಕಲ್ಲ ಒಂದು ಮೊತ್ತ ?
   ಊರಶಾಲೆಯ ಟೀಚರ್, ದಾರಿಯಲ್ಲಿ ಕಾಣಸಿಕ್ಕಿದರೂ ನೋಟ್ಸ್ ಕೊಡುವುದಿಲ್ಲ - ಸರಕಾರದ ಆದೇಶವೇ ಹಾಗಿದೆ . ಓನ್ ಲೈನ್ ತರಗತಿಯ ಓನ್ ಲೈನ್ ದಾಖಲಾತಿ ಬೇಕು .
        ಇನ್ನು ಹೇಗೆ ?
                                            -ಪನೆಯಾಲರವಿರಾಜ.

Monday, October 28, 2019

           ಮಕ್ಕಳ ಹಬ್ಬ

ನರಕಚತುರ್ದಶಿಯಂದು ಎಡನೀರು ಸಂಸ್ಥಾನದಲ್ಲಿ ಎಣ್ಣೆಹಬ್ಬ.
ಪ್ರಾತ:ಪೂಜೆ ಮುಗಿಸಿ ಬಂದ  ಶ್ರೀಮದೆಡನೀರು ಕೇಶವಾನಂದ ಭಾರತೀ ಸ್ವಾಮಿಗಳು, ಮಠದ ಮುಂಭಾಗದಲ್ಲಿ ಆಸೀನರಾಗುತ್ತಾರೆ .
ಮುಂಜಾವದ ಐದು ಗಂಟೆ ಆಸುಪಾಸಿನ ಮುಹೂರ್ತ.
ಊರ - ಪರವೂರ ಭಕ್ತಾದಿಗಳು ,ಕಲಾವಿದರು ಬಂದಿರುತ್ತಾರೆ - ಬರುತ್ತಾರೆ , ಬರುತ್ತಲೂ ಇರುತ್ತಾರೆ.

ನಮಸ್ಕರಿಸಿದ ಶಿಷ್ಯರು , ಹಾಸಿದ ಒಲಿಚಾಪೆಯ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ತಲೆಗೆ ಮಂತ್ರಾಕ್ಷತೆ ಹಾಕಿದ ಶ್ರೀಪಾದಂಗಳು ಕೇಳುತ್ತಾರೆ -
ಎಳ್ಳೆಣ್ಣೆಯೋ
ತೆಂಗಿನೆಣ್ಣೆಯೋ
ಕಾಸಿದೆಣ್ಣೆಯೋ ...
ಶೀತ ಪ್ರಕೃತಿಯವರು ಕಾಸಿದೆಣ್ಣೆ ಬಯಸುತ್ತಾರೆ.
ಎತ್ತಿದ ಸೌಟಿನಿಂದ
ನೆತ್ತಿಗೆ ಎಣ್ಣೆಯ ಧಾರೆ ..
ಜೊತೆಗೆ ಒಬ್ಬರಿಗೊಂದು ಸಾಬೂನು.
ಹಾಸ್ಯ ವಿನೋದಗಳಿಂದ ಸನ್ನಿವೇಶ ರಸಮಯವಾಗುತ್ತದೆ.
ಬದುಕಿನ ಜಂಜಡ ಮರೆಸುತ್ತದೆ.

ಸ್ನಾನ ಮಾಡಿ ಬಂದು , ಪೂಜೆ ನೋಡಿ ಪ್ರಸಾದ ಸ್ವೀಕರಿಸಿದ ಮೇಲೆ . ಬೆಳಗಿನ ತಿಂಡಿ -
ದೋಸೆ , ಚಟ್ಣಿ ,ಬೆಲ್ಲದರವೆ , ವಡೆ , ಸಾಂಬಾರು , ಹಲುವ ,ಮೊಸರು , ಉಪ್ಪಿನಕಾಯಿ ...
ಹೊಟ್ಟೆತುಂಬ.
ಕೆಲವೊಮ್ಮೆ ಶ್ರೀಪಾದಂಗಳೇ ಬಂದು , ಒತ್ತಾಯದಿಂದ ದೋಸೆ ಹಾಕಿಸುವುದೂ ಉಂಟು .

ಸೌಟಿನಿಂದಿಳಿಯುವ ತೈಲಧಾರೆಗೆ ಹನ್ನೊಂದು ವರ್ಷಗಳಿಂದ ತಲೆಯೊಡ್ಡುತ್ತೇನೆ.
ಬಾಗಿ ಕುಳಿತು ಕಣ್ಣು ಮುಚ್ಚುತ್ತೇನೆ ...

ಆರುಮೆಟ್ಟಲಿನ ಎತ್ತರದ ಹಳೇಮನೆ .
ಬಾಗಿಲಿಗೆ ಒರಗಿ , ಕೈಯಲ್ಲಿ ಎಣ್ಣೆ ಕುಜುಳಿ ಹಿಡಿದ ಹೆಣ್ಣುಜೀವವೊಂದು ಕಾಣುತ್ತದೆ .
ಕರೆಯುವುದು ಕೇಳ್ತದೆ -

" ಎಣ್ಣೆಪಸೆ ಇಲ್ಲದೆ ಮೈ - ಕೈ ಎಲ್ಲಾ ಬೂದಿ ಕಾರ್ತದೆ .
ಬಾ ಗುಡ್ಡಾ ..
ಸ್ವಲ್ಪ ಎಣ್ಣೆ ಹಚ್ತೇನೆ .. "

" ನಂಗೆ ಎಣ್ಣೆ ಬೇಡಾ ... "
ಅವಳ ಕೈಗೆ ಸಿಗದೆ ಓಟ ಹೊಡೆಯುವ ಅವನಿಗೆ ಗೊತ್ತು - ಅಬ್ಬೆ ಪಾಪ .. ಅಟ್ಟಸಿಕೊಂಡು ಬರ್ಲಿಕ್ಕಿಲ್ಲ .

ಬಾಗಿ , ಕಣ್ಮುಚ್ಚಿ ಕುಳಿತ ಬೆಳೆದ ಮಗುವಿನ ನೆತ್ತಿಗೆ ಎಡನೀರು ಶ್ರೀಗಳು ಎಣ್ಣೆಹೊಯ್ಯುತ್ತಾರೆ.
ತಲೆಗೆರೆದ ಎಣ್ಣೆ - ಕೆಳಗೆ ಇಳಿಯದಿರುವುದಿಲ್ಲ!
ಮೈಯಿಡೀ ಹರಡಿಕೊಳ್ಳುತ್ತದೆ.

ಪನೆಯಾಲ ರವಿ
28- 10 - 2019

Friday, October 4, 2019

ಗಾನಕೋಗಿಲೆಯೊಡನೆ ಸ್ವಗತ .



    ಪಡಿಮಂಚವನ್ನೇರಿದರೆ ರಂಗವನ್ನೆಲ್ಲ ಆವರಿಸುವ, ಗಂಭೀರ ಸ್ವಭಾವ - ಸೌಷ್ಟವ - ಶಾರೀರ..
ಮುಮ್ಮೇಳದತ್ತ ಸದಾ ನೆಟ್ಟಿರುವ ದೃಷ್ಟಿ ಸೂಕ್ಷ್ಮತೆ ..
ರಂಗದಲ್ಲಿರುವಾಗ ಚೆಲ್ಲಾಟ - ಪಟ್ಟಾಂಗಗಳಿಲ್ಲದ ಸ್ಥಾನ ಪ್ರಜ್ಞೆ ..
ವ್ಯಂಗ್ಯ  ವಿನೋದ , ಹಾಸ್ಯ ವಿಡಂಬನೆಗಳನ್ನು ತಾನೊಂದಾಗಿ ಸವಿಯುವ , ಕೆಲವೊಮ್ಮೆ ಗಹಗಹಿಸುವ ಮುಗ್ಧ ರಸಿಕತೆ ..
ಭಕ್ತಿ- ಕರುಣ ರಸಘಟ್ಟಗಳಲ್ಲಿ ಹಾಡುತ್ತ ಮೈಮರೆಯುವ ಭಾವನಿರ್ಭರತೆ ..
ಭಕ್ತಿ - ಕರುಣ ರಸಗಳನ್ನು ಅರ್ಥಧಾರಿ ಮಾತಿನಿಂದ ಚಿತ್ರಿಸುವಾಗ --  ಹಸುಕಂದನಿಗೆ ಹಾಲೂಡುವ ಹೆತ್ತಬ್ಬೆಯಂತೆ ನಿಶ್ಚಲನಾಗಿರುವ ರಸತಾದಾತ್ಮ್ಯ ..
ರಂಗವೇರಿದ ಮೇಲೆ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಮರೆತೇಬಿಡುವ ಮನಃಪಾಕ ..
ಅಗ್ಗದ ಜನಪ್ರಿಯತೆಗೆ,ಹಣದ ಮೋಹಕ್ಕೆ ,ವಾಟ್ಸೇಪ್ ಲೈಕುಗಳಿಗೆ ತನ್ನನ್ನೆಂದೂ ಮಾರಿಕೊಳ್ಳದ ಗಾಯನ ಸಂಸ್ಕಾರ ..
                   ಇತ್ಯಾದಿ ಗುಣಗಣಗಳಿಂದ ನೀವು ಅತಿ ಶ್ರೀಮಂತರು ಭಾಗವತರೇ .
       ಶ್ರೀ ಎಡನೀರು ಮೇಳದಲ್ಲಿ ನಿಮ್ಮೊಂದಿಗೆ ನಾನೂ ರಂಗವೇರಿದೆ. ಆ ಹತ್ತು ವರ್ಷಗಳು , ಶ್ರೀಮದೆಡನೀರಿನ ನಮ್ಮ ಸ್ವಾಮೀಜಿ, ನನಗೆ ಕೊಡಮಾಡಿದ ಮಹಾದಾನ .
ನನ್ನ ಬದುಕಿನ ಆ ಸುವರ್ಣ ಕಾಲದಲ್ಲಿ ನನಗೆ ತಿಳಿದಂತೆ ಕುಣಿದೆ - ಹಾರಿದೆ - ಹಾಡಿದೆ - ನಗಾಡಿದೆ - ಕಣ್ಣೀರಿಟ್ಟೆ .
    ನಾನುಂಡ ಆ ರಂಗಸುಖಕ್ಕೆ, ಸವಿದ ವಾತ್ಸಲ್ಯಕ್ಕೆ ಪ್ರತಿಯಾಗಿ ನಾನೇನು ಕೊಟ್ಟೇನು !
    ನಾನು ಬಡವ ಭಾಗವತರೇ.
ರಾಗತಾಳಗನ್ನರಿಯದ ಪಾಮರನ ನಾಡಿನರಗಳಲ್ಲೂ ಸಂಚರಿಸಿ,ಅವಾಚ್ಯ ಆನಂದವನ್ನು - ಸುಖದ ನೋವನ್ನೂ ಉಕ್ಕಿಸುವ , ನಿಮ್ಮ ಗಾಯನಗಂಗೆಯಲ್ಲಿ ಮಿಂದೇನು ಮಾತ್ರ.

ಕಲಾವಿದರನ್ನೂ ಕಲಾಸಕ್ತ ಶಿಷ್ಯರನ್ನೂತಾಯಿಯಾಗಿ ಪೋಷಿಸುವ , ತಂದೆಯಂತೆ ರಕ್ಷಿಸುವ ಶ್ರೀಮದೆಡನೀರು ಪಾದಂಗಳವರು - " ದಿನೇಶ ನಮ್ಮ ಶಿಷ್ಯ " ಎಂದಾಡಿದ ವಚನಮಾಲಿಕೆಯಿಂದ ಸಂಮಾನಿತರು ನೀವು  -- ನಿಜಭಾಗ್ಯಶಾಲಿ.
ನಿಮಗೀಗ ಷಷ್ಟ್ಯಬ್ದಿ ಪೂರ್ತಿ .. ಅದು ನಮ್ಮ ಸಂಭ್ರಮ.

  ನಮ್ಮ ಮನದಮನೆಯೊಳಗೆ ನಿಮಗಾಗಿ ಕಾದಿರುವ ಮನ್ನಣೆಯ ಮಣೆಯಿದೆ ..
                                       ಮರೆಯದಿರಿ .
                                                           ಅಭಿವಾದನಗಳು.

ಪನೆಯಾಲ ರವಿ.
4 - 10 - 2019

Thursday, July 26, 2018

      ‌                            ಗ್ರಹಣ
   
ಬಾವಲಿಹಾರದ,ಗಾಳಿಬೀಸದ, ತೆಂಗು ತೂಗದ ನಿಶ್ಚಲ ನಿಶೆ . ಟಿಟ್ಟಿಭ ಕೂಡ ಕೂಗದ, ನೀರವ ಮೌನ.
ಆ ರಾತ್ರಿ -
ಚಂದ್ರಗ್ರಹಣ .
ಕರೆಜರಿದ ಜಗಲಿಯಲ್ಲಿ ತಾಯಿ ಕೂತಿದ್ದಳು - ಪುತ್ರರೊಂದಿಗೆ. ಆಗಲೂ ಅವಳ ಕೈ ಸುಮ್ಮಗಿರದೆ , ಹಣ್ಣಡಿಕೆಯನ್ನು ಗೊನೆಯಿಂದ ಬೇರ್ಪಡಿಸುತ್ತಿತ್ತು. ಕೆಲಸವೇ ಅವಳ ಬದುಕು .ಮಕ್ಕಳ ಬಾಯಿ ಮುಚ್ಚಿರಲಿಲ್ಲ .ಅವರಿಗೆ ಬೇರೆ ಕೆಲಸವೂ ಇರಲಿಲ್ಲ.
     " ರಾಹುವಿನ ಕೈಗೆ ಸೋಲಾಗಲಿ..
        ಚಂದ್ರನ ಕೈ ಮೇಲಾಗಲಿ ..."
ಎಂಬ  ಮಂತ್ರವನ್ನು ತಾಯಿ ತಾನೂ ಪಠಿಸುತ್ತ , ಮಕ್ಕಳಲ್ಲೂ ಹೇಳಿಸುತ್ತಿದ್ದಳು.
       
ಅವರು ಚಂದಮಾಮನ ಬಿಡುಗಡೆಗಾಗಿ ಹಂಬಲಿಸುತ್ತಿದ್ದರು .ರಾಹು ಎಂಬ ಸರ್ಪ ತಿಂಗಳದೇವರನ್ನು ನುಂಗಿದರೆ ಗತಿಯೇನು ! ತಮ್ಮ ಮಂತ್ರಜಪ ಫಲಿಸುವ ಬಗ್ಗೆ ಅವರಿಗೇನೂ ಸಂದೇಹ ಇರಲಿಲ್ಲ .ಆದರೂ ಒಳಗಿಂದೊಳಗೆ ಸಣ್ಣ ಭೀತಿ. ಅಮ್ಮನಿಗೆ ಒತ್ತಿ ಕೂತು, ಆಗಾಗ ಮೇಲೆ ನೋಡುತ್ತಿದ್ದರು .

ಊಟ ಹೇಗೂ ಇಲ್ಲ - ಬಾನಿನಲ್ಲಿ ದೇವರು ಕಷ್ಟಪಡುವಾಗ ನಾವು ಉಣ್ಣಬಹುದೇ? ಇದ್ದ ಸ್ವಲ್ಪ ಮಜ್ಜಿಗೆಗೆ ತುಳಸಿಎಸಳು ಹಾಕಿ ಮುಚ್ಚಿಟ್ಟಾಗಿತ್ತು.
ಸಮಯ ಸರಿಯಿತು ..

ತಾಯಿಮಕ್ಕಳ ಮೇಲೆ..ಎದುರಿಗಿದ್ದ, ಸೆಗಣಿಸಾರಿಸಿದ ಅಂಗಳದ ಮೇಲೆ...ಎಲ್ಲೆಲ್ಲೂ - ಹಾಲಿನ ಮಳೆ!
ಹಾಲಿನಂಥಾ ಬೆಳದಿಂಗಳು .

ಪ್ರಾರ್ಥನೆ ಫಲಿಸಿತು .! ಗ್ರಹಣ ಮೋಕ್ಷ .

          ಕಾಲಾಂತರದಲ್ಲಿ ಅವಳು, ಕಾಲಕ್ಕೆ ಬಲಿಯಾದಳು.ಎಷ್ಟೋ
ಮೈಲುಗಳಾಚೆ ಇದ್ದ ,ಚಂದ್ರಮನ ಬಿಡುಗಡೆಗಾಗಿ ಹಂಬಲಿಸಿದಾಕೆಯನ್ನು ಕಾಲರಾಹು ನುಂಗಿಹಾಕಿತು . 
       ಬೆಳೆದ ದೇಹದ ಬಾಲರು ಈಗಲೂ ಕಾಯುತ್ತಿದ್ದಾರೆ..
ಕಾಳಸರ್ಪ ಬಿಟ್ಟುಕೊಡುವ ಅಬ್ಬೆಗಾಗಿ..
ತಮ್ಮ ಕೆನ್ನೆ ಸವರುತ್ತಿದ್ದ , ಕಠಿಣ ಕೆಲಸದಿಂದ ಒರಟಾದ ಹಸ್ತಗಳಿಗಾಗಿ. ಆ ಕೈಗಳ ಮೃದುತ್ವಕ್ಕಾಗಿ .

ಹಣ್ಣಡಿಕೆ ಘಮ ಬೀರುವ ಆ ಕೈಗಳಿಗಾ  ....

Sunday, August 20, 2017

    ನಿದ್ದೆ ಬಾರದ ರಾತ್ರಿ..

ರಾತ್ರೆ ಗಂಟೆ ಹನ್ನೆರಡು ದಾಟಿತ್ತು. ಜಡಿ ಮಳೆ.ಗುಂಡಾಗುಂಡಿ ರಸ್ತೆ.ಆಟ ಮುಗಿಸಿ ಬರುವಾಗಿನ ಸುಸ್ತು - ಮಂಪರು.ಡ್ರೈವ್ ಮಾಡುವ ಸಹನೆಯೂ ಇರಲಿಲ್ಲ.
 ಸಾಲದ್ದಕ್ಕೆ ಹೆಂಡತಿಯ ಮೆಸ್ಸೇಜ್ ತಲೆ ಕೊರೆಯುತ್ತಿತ್ತು..
 ನಮ್ಮ ಮಗ..
ಹಗಲಿಡೀ ಕೆಮೆಸ್ಟ್ರಿ ಲ್ಯಾಬಿನಲ್ಲಿ ನಿಂತು ಕಾಲು ಸಿಡಿಯುತ್ತದಂತೆ.ನಾಳೆ ಯಾವದೋ ಟೆಸ್ಟು ಉಂಟು , ಓದಿ ಮುಗಿಸಲೇ ಬೇಕು. ಬೆಳಗ್ಗೆ ಮೂರು ಗಂಟೆಗೆ ಎಬ್ಬಿಸಬೇಕು.
  ಇಷ್ಟೇ ಆದರೆ ಚಿಂತೆ ಇರ್ಲಿಲ್ಲ.ಮೊನ್ನೆ ಬೈಕಿಂದ ಬಿದ್ದು..ಮೊಣಕಾಲ ಸಿಪ್ಪೆ ಹೋಗಿ..ಕಾಲು ಮಡಚುವುದೇ ಕಷ್ಟ ಆಗಿದೆ ಅವನಿಗೆ.ಪೇಂಟು ಹಾಕಿದ್ರೆ ಗಾಯಕ್ಕೆ ಒರೆಸ್ತದೆ.ರೈನ್ಕೋಟು ಹಾಕಿದ್ರೆ ಅಂತೂ ಕತೆ ಕೈಲಾಸ !
 ಮನೆ ಸೇರಿ ಮಿಂದು ಬಂದೆ.ಮಳೆ ನಿಂತಿತ್ತು.ಇವಳ ಸಣ್ಣ , ಸುಯ್ಲಿನಂಥಾ ಗೊರಕೆಯ ಶೃತಿ..
ಹೋಗಿ ಮಗನ ಬಳಿ ಮಲಗಿದೆ.ಹೊಡಚಾಡುತ್ತಲೇ ಇದ್ದಾನೆ.ನಿದ್ದೆಯ ಆಳಕ್ಕೆ ಇನ್ನೂ ಇಳಿದಿಲ್ಲ..
  ಓರೆ ಮಲಗಿ ಅವನನ್ನು ಬಳಸಿ ಹಿಡ್ಕೊಂಡೆ.ಮಿಸುಕಾಡಿದ.
' ಭಟ್ಟಾ...ಏ ಭಟ್ಟಾ..' ಕರೆದೆ.ಹೂಂಗುಟ್ಟಿದ. ' ಕಾಲಿಗೆ ಎಣ್ಣೆ ಹಚ್ಬೇಕಾ..? '
ಬೇಡ ಹೇಳಿ ಕವುಚಿ ಮಲಗಿದ. ಫ್ಯಾನ್ ಐದರಲ್ಲಿಟ್ಟೆ - ನಂಗೆ ಚಳಿ ಆಗ್ತಿತ್ತು- ಆದರೆ ಅವನಿಗೆ ಅದೇ ಇಷ್ಟ ! ಮುಸುಕು ಹಾಕಿ ಕಣ್ಣು ಮುಚ್ಚಿಕೊಂಡೆ.
.... ಈ ಕಾಲುನೋವಿನಲ್ಲಿ.. ಸರಿಗಟ್ಟು ನಿದ್ದೆಯೂ ಇಲ್ಲದೆ , ಇವ ಪರೀಕ್ಷೆಗೆ ಬರೀಲಿಕ್ಕೆ ಉಂಟಾ ! ಅಡ್ಡಬಂದ ನಾಯಿ ಹಾಳಾಗಿ ಹೋಗ್ಲಿಕ್ಕೆ.. ಸಾವಿರಸಲ ಹೇಳಿದ್ದೇನೆ - ಸ್ವಲ್ಪ ಜಾಗ್ರತೆಯಲ್ಲ್ಲಿ  ಬೈಕು ಬಿಡ್ಳಿಕ್ಕೆ ಇವನಿಗೇನು ಸಂಕಟ ...
 ನಿದ್ದೆಗೆ ಜಾರಿದ್ದು ನನಗೇ ಗೊತ್ತಾಗಲಿಲ್ಲ..
ಭಾಗವತಿಗೆ ಕೇಳಿ ದಡಕ್ಕನೆ ಎಚ್ಚರ ಆಯ್ತು..
ಎಚ್ಚರಿಸಿದ್ದು ಅಲಾರಮ್ !
 ಇವನ ಅಲಾರಂ , ರಿಂಗ್ಟೋನ್ ಎಲ್ಲ ಅಮ್ಮಣ್ಣಾಯರ ಪದ್ಯವೇ !
  ಗಂಟೆ ಮೂರು ... ಮಗನಿಗೆ ಒಳ್ಳೆ ನಿದ್ದೆ. ಎಬ್ಬಿಸ್ಬೇಕಲ್ಲ.. ಬಿದ್ದ ನೋವು , ನಿನ್ನೆಯ ಆಯಾಸ , ಮಲಗಿದ್ದು ತಡವಾಗಿ , ಬಾರದ ನಿದ್ದೆ... ಹೇಗಪ್ಪಾ ..
ಪಾಪ - ಪುಣ್ಯ ನೋಡಿದ್ರೆ ,ಓದಿ ಆಗ್ಬೇಡ್ವಾ.. ಪರೀಕ್ಷೆ ಉಂಟಲ್ಲ್ವಾ..!
ಎಬ್ಬಿಸಿದೆ.
ದಡಕ್ಕನೆ ಎದ್ದು ಕೂತ.!
ಪರೀಕ್ಷೆ ತಲೆಬಿಸಿ ಜೋರುಂಟು .. ಗಟ್ಟಿಗ ಮಾಣಿ ಅಂತ ನಂಗೆ ಕುಷಿ ಆಯ್ತು.
ನನ್ನ ಮುಸುಕು ಸರಿಸಿ ಅವ ಹೇಳಿದ್ದೆಂತ ಗೊತ್ತುಂಟಾ...

   " ಅಪ್ಪಾ ನಾವೊಂದು ' ಪ್ಯಾಶನ್ ಪ್ರೋ ತೆಗವನಾ...? "